ಜಿಗಟು ಅಂಟು -
	ಸಸ್ಯ ಹಾಗೂ ಪ್ರಾಣಿಜನ್ಯ ಅಂಟು. ಗ್ಲೂ ಚರ್ಮ, ಗೊರಸು ಮೂಳೆ, ಕೊಂಬು ಮುಂತಾದವನ್ನು ಬಿಸಿನೀರಿನಲ್ಲಿ ಪುನಃ ಪುನಃ ಬೇಯಿಸುವುದರಿಂದ ಉತ್ಪತ್ತಿಯಾಗುತ್ತದೆ. ಇಂಥ ವಸ್ತುಗಳಲ್ಲಿನ ನೀರೆಲ್ಲ ಆವಿಯಾದಾಗ ಇದು ಗಡಸುಗೊಂಡು ಬೇರ್ಪಡುತ್ತದೆ. ಇದರ ದೋಷವೆಂದರೆ ಇದು ಶೀತ ಹವೆಯಲ್ಲಿ ನೀರನ್ನು ಹೀರಿ ಉಬ್ಬುವುದು ಮತ್ತು ಒಣ ಹವೆಯಲ್ಲಿ ನೀರು ಆವಿಯಾದಾಗ ಕುಗ್ಗುವುದು. ಇದರಿಂದಾಗಿ ಈ ಅಂಟು ಸೀಳಿ ಉದುರಬಹುದು. ಅಲ್ಲದೇ ನೀರಿನಲ್ಲಿ ಕರಗಿಹೋಗುವ ಗುಣವೂ ಇದಕ್ಕೆ ಉಂಟು. ಗೋಡೆಗಳಿಗೆ ಹಾಕುವ ಡಿಸ್ಟೆಂಪರ್ ಬಣ್ಣಗಳಲ್ಲಿ ಇದರ ಉಪಯೋಗ ಹೆಚ್ಚು. ಪಿಷ್ಟದಿಂದ ತಯಾರಾದ ಅಂಟುಗಳು ಸಹ ನೀರಿನಲ್ಲಿ ನಿತ್ರಾಣಿಗಳಾಗುತ್ತವೆ. ಆದರೂ ಇವುಗಳ ಸುಲಭ ಬೆಲೆಯ ಕಾರಣ ಮನೆ ಒಳಗೆ ಉಪಯೋಗಿಸುವ ಪ್ಲೈವುಡ್ ತಯಾರಿಕೆಗೆ ಇವನ್ನು ಉಪಯೋಗಿಸುತ್ತಾರೆ. ಸೋಯಬೀನ್ಸ್‍ನಲ್ಲಿರುವ ಪ್ರೋಟೀನ್ ಮತ್ತು ಹಾಲಿನ ಕೆನೆಯಲ್ಲಿರುವ ಕೇಸೀನ್ ಎಂಬ ಸಸಾರಜನಕ ಪದಾರ್ಥಗಳು ಸಹ ಕ್ಷಾರಗಳಲ್ಲಿ (ಆಲ್ಕಲಿ) ಕರಗಿದಾಗ ಅಂಟಾಗಿ ಮಾರ್ಪಡುತ್ತವೆ. ಇವು ನೀರಿನಲ್ಲಿ ಕರಗುವುದಿಲ್ಲ. ಮೊಟ್ಟೆಯಲ್ಲಿರುವ ಬಿಳಿ ಲೋಳೆ ಅಥವಾ ರಕ್ತದಲ್ಲಿರುವ ಲಸಿಕೆಗಳಿಂದ ತಯಾರಾದ ಅಂಟುಗಳು ತಣ್ಣೀರಿನಲ್ಲಿ ಕರಗುವುವಾದರೂ ಬಿಸಿನೀರಿನಲ್ಲಿ ಕರಗುವುದಿಲ್ಲ. ಮರಗೆಲಸಕ್ಕೆ ಈ ಅಂಟುಗಳು ಬಲು ಉಪಯುಕ್ತ. 

	ಫೀನಾಲುಗಳು ಮತ್ತು ಯೂರಿಯಗಳಿಂದ ಸಂಶ್ಲೇಷಿತ ರಾಳಗಳನ್ನು (ಸಿಂಥೆಟಿಕ್ ರೆಸಿನ್ಸ್) ತಯಾರಿಸುತ್ತಾರೆ. ಸುಮಾರು 100ಲಿಸೆ. ಯಷ್ಟು ಉಷ್ಣತೆಯಲ್ಲಿ ಇವು ಗಡುಸಾದ ಅಂಟುಗಳಾಗುತ್ತವೆ. ಇವು ಬಹುಕಾಲ ಕೆಡದೆ ಉಳಿಯುತ್ತವೆ. ಅಲ್ಲದೆ ಹವೆಯ ವೈಪರೀತ್ಯಗಳು ಇವುಗಳ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡುವುದಿಲ್ಲ. ಇವನ್ನು ಅತ್ಯುತ್ತಮ ದರ್ಜೆಯ ಪ್ಲೈವುಡ್ ತಯಾರಿಕೆಯಲ್ಲಿ ಮತ್ತು ಇತರ ಮುಖ್ಯ ಮರದ ಕೆಲಸಗಳಲ್ಲಿ ಉಪಯೋಗಿಸುತ್ತಾರೆ. 

	ಕೆಲವು ಮರಗಳಿಂದ ಸೂಸುವ ಗೋಂದು ಒಂದು ಸ್ವಾಭಾವಿಕ ಅಂಟು. ಇದಕ್ಕೆ ಅಷ್ಟೇನು ತ್ರಾಣವಿಲ್ಲದ್ದರಿಂದ ಸಾಮಾನ್ಯವಾಗಿ ಕಾಗದ ಅಂಟಿಸಲು ಮಾತ್ರ ಇದನ್ನು ಬಳಸಲಾಗುತ್ತದೆ.
(ವೈ.ವಿ.ಆರ್.)
ಪರಿಷ್ಕರಣೆ : ಹರೀಶ್ ಭಟ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ